ಹೆಂಚ್, ಫಿಲಿಪ್ ಷೊವಾಲ್ಟರ್
	1896-1965. ಅಡ್ರೀನಲ್ ಕಾರ್ಟೆಕ್ಸ್‍ನಿಂದ (ಅಡ್ರೀನಲ್ ಗ್ರಂಥಿಯ ಹೊರಪದರ) ಉತ್ಪಾದನೆಯಾಗುವ ಹಾರ್ಮೋನುಗಳ ಆವಿಷ್ಕಾರ, ಸಂರಚನೆ ಮತ್ತು ಜೈವಿಕ ಪರಿಣಾಮಗಳ ಅಧ್ಯಯನಕ್ಕಾಗಿ ಅಮೆರಿಕದ ಎಡ್ವರ್ಡ್ ಕ್ಯಾಲ್ವಿನ್ ಕೆಂಡೆಲ್(1886-1972) ಮತ್ತು ಪೋಲಂಡ್ ಸಂಜಾತ ಸ್ವಿಟ್ಜರ್ಲೆಂಡ್ ಪ್ರಜೆ ಟೇಡಿಯಸ್ ರೀಚ್‍ಸ್ಟೈನ್‍ರೊಂದಿಗೆ (1897-1996) ಶರೀರವಿಜ್ಞಾನ-ವೈದ್ಯವಿಜ್ಞಾನದ 1950ರ ನೊಬೆಲ್ ಪಾರಿತೋಷಕವನ್ನು ಪಡೆದ ಅಮೆರಿಕನ್ ವಿಜ್ಞಾನಿ. 

	ಪಿಟ್ಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಸ್ನಾತಕ ಪದವಿಯನ್ನು ಪಡೆದ (1920) ಹೆಂಚ್ 1921ರಲ್ಲಿ ರೊಡೆಸ್ಟರ್‍ನ ಮೇಯೊಕ್ಲಿನಿಕ್ ಸೇರಿದ. ವಿಶ್ರಾಂತನಾಗುವ ತನಕವೂ (1957) ಅಲ್ಲಿ ಕೆಲಸಮಾಡಿದ. 

	ತೀರ ನೋವು ತರುವ ಮತ್ತು ಕುಂಟುತನಕ್ಕೆ ಕಾರಣವಾಗುವ ರುಮಟಾಯಿಡ್ ಆರ್ತ್‍ರೈಟಿಸ್ (ತೀವ್ರ ಸಂಧಿವಾತ) ಲಕ್ಷಣಗಳು ಗರ್ಭಿಣಿಯರಲ್ಲಿ ಮತ್ತು ಕಾಮಾಲೆ ರೋಗಿಗಳಲ್ಲಿ ಕಡಮೆಯಾಗುವುದನ್ನು ಹೆಂಚ್ ಗಮನಿಸಿದ. ಆದ್ದರಿಂದ ಆ ರೋಗ ಬ್ಯಾಕ್ಟೀರಿಯ ಧಾಳಿಯಿಂದ ಉಂಟಾಗದ ಯಾವುದೋ ಜೀವರಾಸಾಯನಿಕ ಕ್ಷೋಭೆಯಿಂದ ಬರುವುದೆಂಬ ಸಂದೇಹ ಅವನಿಗೆ ಬಂತು. ಅನಂತರ ನಿರ್ನಾಳ ಗ್ರಂಥಿಗಳ ಸ್ರಾವಕ್ಕೂ ರುಮಟಾಯಿಡ್ ರೋಗಗಳಿಗೂ ಇರುವ ಸಂಬಂಧವನ್ನು ಅಧ್ಯಯಿಸಿದ. 1940ರ ದಶಕದಲ್ಲಿ  ಸಂಕ್ಷೇಪಿಸಲಾದ ಸ್ಟೆರಾಯ್ಡ್ ಹಾರ್ಮೋನನ್ನು ರೋಗಿಗಳಿಗೆ ಕೊಟ್ಟಾಗ ಅವರು ತುಂಬಾ ಸುಧಾರಿಸಿದುದನ್ನು ಹೆಂಚ್ ತಿಳಿದ. ಆನಂತರ ತೀವ್ರ ಸಂಧಿವಾತದ ಚಿಕಿತ್ಸೆಯಲ್ಲಿ ಕಾರ್ಟಿಸೋನ್ ಹೆಸರಿನ ಅಡ್ರೀನಲ್ ಹಾರ್ಮೋನ್ ಮುಖ್ಯ ಔಷಧವಾಯಿತು. ಕಾರ್ಟಿಸೋನ್ ಬಳಕೆಯಿಂದ ಕೆಟ್ಟ ಉಪಪರಿಣಾಮಗಳು ಕಂಡುಬಂದರೂ ಹೆಂಚ್ ನಡೆಸಿದ ಅಧ್ಯಯನ ಆಧುನಿಕ ಹಾರ್ಮೋನ್ ಚಿಕಿತ್ಸೆಯಲ್ಲಿ ಒಂದು ಮುಖ್ಯ ಘಟ್ಟವಾಯಿತು. 						
		(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ